ಪ್ರಾರ್ಥನೆ

ಜಯದುರ್ಗೆ

(ವೇಲಾಪುರ ಮಹಿಷಮರ್ದಿನೀ ಸ್ತೋತ್ರ)

ತಾಯೆ ಜಯ ಕಾಯೆ ಜಗ ಶಿವನ ಜಾಯೇ
ಮಾಯೆ ಮನಕಾಯ ನುಡಿ ತುಂಬಿ ಕಾಯೇ    ||ಪ||

ಕೇಕಿವರ್ಮನ ಸುತನ ಸುತನು ಚಂದ್ರಾಂ-
ಗದನಸುತೆ ಸುಂದರಿ ಸುಶೀಲೆ ಲೋಲೇ
ವಾಹಿನಿಯ ಜಲದಲ್ಲಿ ಜಲಕವಾಡೆ
ಮೋಹಿಸಿದ ಗಂಧರ್ವನವಳ ಕಾಡೇ            ||ತಾಯೇ||

ನೆನೆಯೇ ಮನದಲಿ, ನೊಂದು, ನಿನ್ನ ಲೀಲೇ
ಕಳಿಸಿ ವಿಪ್ರನ ಮಂತ್ರದಲಿ ಕಾದೆಲೆ
ಅವನ, ನೀನವಳ ಪತಿಗೊಳಿಸಿ ಪೊರೆದೇ
ನಿನ್ನ ಮಾಯೆಯನೆಂತು ನಾ ಪೊಗಳುವೆ          ||ತಾಯೇ||

ಪಡೆಯಲಾಕೆಯು ಸುತನ ಜಯಸಿಂಹನಾ
ನೀಡಿ ಪೆಸರನು ವಿಧ್ಯೆ ಬುದ್ಧಿಗಳನೂ
ಬಳಸಿದೆಯ ನಿನ್ನವರ ನರಪಸುತನಾ
ಹೇ ತಾಯೆ ಕಾಡೆ ವಿಧಿ ಕೊಟ್ಟೆ ತಪವಾ          ||ತಾಯೇ||

ಗುಹನ ವರಧಾಮದಲಿ ನೊಂತು ತಪಿಸೆ
ವರಿಸೆಯವನನೆ ಕುವರ ಮಂಗಲಕ್ಕೆ
ಬರಿಸಿ ನೆಲಸುವ ತೆರದೆ ನೀನೊಲಿಸಿದೆ
ವರ ಕುವರನಿಗೆ ವರವ ನೀ ಕೊಡಿಸಿದೆ             ||ತಾಯೇ||

ಪಾಂಡ್ಯದೊರೆ ಪಯಸ್ವಿನಿಯ ತಟದಿ ಹೊಡೆಯೇ
ಕೊಂದ ಜಯಸಿಂಹನಿಗೆ ಜಯ ತೊಡಿಸಿದೇ
ಹಿಂಡು ಹಿಂಸಕ ಜಂತು ಜನರ ಕಾಡೇ
ನಿಂದವನ ಶಸ್ತ್ರದಲೆ ಕಡಿಕೆದಹಿದೇ                   ||ತಾಯೇ||

ಅಹಿಜೋಡ ಕಂಡವರ ತೆರ ಮೋಹದೇ
ಅಹಿರೂಪದಲೆ ಸತಿಯ ವಿಪ್ರ ಕೂಡೇ
ಅವಿವೇಕದಲಿ ಕುವರ ಬಾಣ ಹೋಡೇ
ಅವನೈದೆ ಪರಗತಿಗೆ ಸತಿಯು ಕೂಗೇ               ||ತಾಯೇ||

ಅವಳ ಶಾಪದೆ ನೀನೆ ರಾಜ್ಯ ಸೆಲೆದೇ
ಕುವರನನು ರಾಮನಾಥನ ಪುರಕ್ಕೆ
ಕಳಿಸಿ ಶಿವನನ್ನೊಲಿಸಿ, ಭೂಸುರನನಾ
ಶಂಕರನ ಜತೆಗೂಡಿ ಮರಳಿ ಕರೆದೇ                 ||ತಾಯೇ||

ಅವನೆ ಭೂಸುರ ಶಿವನ ನುಡಿಯ ನಡೆಯ ನಡೆದೂ
ಭವನ ಸತಿ ನಿನ್ನ ಬಲು ತಪದಿಯೋಲಿಸೇ
ಕಾಯೆ ಕಾಳಿಯ ರೂಪದಲಿ ಮಂತ್ರದೀ
ಹೊಮವಿಡೆ ಕಾವೆ ನಾನೆನದರುಹಿದೇ                   ||ತಾಯೇ||

ಮುಗರಪಡೆ ಹೊಡೆಯೆ ಜಯಸಿಂಹಪಡೆಯಾ
ಭೀಕರಾಕಾರದಲಿ ಕಾಳಿಯಾಗಿ
ಹಿಂಡುವಜ್ರದ ತುಂಬಿ ಝೇಂಕಾರದೀ
ಕೆಡೆದೆ ಚಾಂಡಲರನು ರಾಶಿರಾಶೀ                      ||ತಾಯೇ||

ಪೊರೆದೆ ಜಯಸಿಂಹನನು ಪ್ರೀತಿಕೂಡೀ
ಕರೆದೆ ಶುಭ, ಮೆರೆದೆ ಜಯ, ಖಳಮರ್ದಿನೀ
ಸುರಿಯೆ, ಸುಮಸರಿಯ ಸುರವೃಂದ ಮುದದೀ
ವರಸುಭೂಸುರ ನರರು ನಲಿಯೆ ನುತಿಸೀ        ||ತಾಯೇ||

ಕಾದಂಬವನನಿಲಯೇ ಕಾದಂಬನಾ
ಕಾದಂಬೆ ನೀ ಚಿಕುರಕಾದಂಬಿನೀ
ಕೋದಂಬು ಶಿವಧುನಗೆ ದುಷ್ಟಹತಿಗೇ
ಕಾದಂಬು ಖೂಳನರಮರಬೇರಿಗೇ                 ||ತಾಯೇ||

ಪಾವನಸುವೆಲಾಪುರದ ನಿಲಯದೀ
ಭಾವುಕರ ಹರಸಲಿಕೆ ನೀ ನೆಲಸಿದೀ
ಮುಗರ ಮಾಹಿಷ ಖಳರ ಮರ್ದಿನಿಯೇ
ಹರಸು ನಿನ್ನೀ ಸುತರನಮ್ಮ ತಾಯೇ                ||ತಾಯೇ||

ಖಳಭಂಡ ಮಾಹಿಷನ ನೆಲಕೊತ್ತಿದ
ಶೂಲದಲ್ಲಿ ಕೊತ್ತಿ ನೀ ಕತ್ತ ತರಿದೇ
ಕಷ್ಟಾ ದುರಿತವನಂತೆ ಸಂಹರಿಸುವೆ
ಇಷ್ಟ ಶಾಶ್ವತಶಾಂತಿ ನಾ ಬೇಡುವೆ                  ||ತಾಯೇ||

ಜಯ ದುರ್ಗೆ,  ಜಯ ದುರ್ಗೆ, ಜಯ ಶಿವಾನಿ
ಜಯಸಿಂಹಕರಮಲಪೂಜಿ ತಾಂಘ್ರೀ
ಜಯ ಶಂಕರಪ್ರವರಗಕಲಂಕವರದೇ
ಜಯಸುವೇಲಾಪುರದಿ ಲೀಲಾವಿನೋದೇ          ||ತಾಯೇ||

                                 -ಡಾ| ಉಪ್ಪಂಗಳ ರಾಮಭಟ್ಟ